ಋತ್ವಿಕ್
	
ಯಜ್ಞ ಯಾಗಾದಿ ಶ್ರೌತಕರ್ಮಗಳನ್ನು ನಡೆಸಿಕೊಡುವ ಪುರೋಹಿತ. ಆ ವಿಹಿತಕರ್ಮಗಳಲ್ಲಿ ಭಾಗವಹಿಸುವ ಅನೇಕ ಋತ್ವಿಜರಲ್ಲಿ ಹೋತೃ, ಉದ್ಗಾತೃ, ಅಧ್ವರ್ಯ, ಬ್ರಹ್ಮ-ಎಂಬುವರು ಪ್ರಧಾನರಾಗಿರುತ್ತಾರೆ. ಮೊದಲ ಮೂವರು ಕ್ರಮವಾಗಿ ಋಗ್ವೇದ, ಯಜುರ್ವೇದ, ಸಾಮವೇದಗಳನ್ನು ಪ್ರತಿನಿಧಿಸುತ್ತಾರೆ; ಬ್ರಹ್ಮನೆಂಬ ಋತ್ವಿಕ್ಕಿಗೆ ಯಾಗಾದಿಗಳ ಮೇಲ್ವಿಚಾರಣೆ ಸೇರಿದೆ. ಹೋತೃವು ಋಗ್ವೇದದಿಂದ ಪ್ರಶಂಸನ ರೂಪದಲ್ಲಿರುವ ಋಕುಗಳನ್ನು (ನೋಡಿ- ಋಕ್) ಪಠಿಸಿ ದೇವತೆಗಳನ್ನು ಆಹ್ವಾನಿಸುತ್ತಾನೆ; ಯಾಗದಲ್ಲಿ ಬೇಕಾಗುವ ಸೋಮವನ್ನು ಸಿದ್ಧಪಡಿಸುವಾಗ, ಆಹುತಿ ಮಾಡುವ ಸಂದರ್ಭಗಳಲ್ಲಿ ಉದ್ಗಾತೃ ಸಾಮವೇದದಿಂದ ಸಾಮಗಳನ್ನು ರಾಗವಾಗಿ ಹೇಳುತ್ತಾನೆ; ಅಧ್ವರ್ಯು ಕಾರ್ಯನಿರ್ವಾಹಕನಾಗಿದ್ದು ಯಜುರ್ವೇದದಿಂದ ಯಜುಸ್ಸುಗಳನ್ನು ಉಚ್ಚರಿಸುತ್ತ ಎಲ್ಲ ನಿರ್ದಿಷ್ಟ ಕ್ರಿಯೆಗಳನ್ನೂ ಮಾಡುತ್ತಾನೆ. ಯಾಗದ ಮೇಲ್ವಿಚಾರಣೆಯನ್ನು ವಹಿಸಿಕೊಂಡು ಅದನ್ನು ರಾಕ್ಷಸಾದಿಗಳ ಪೀಡೆಯಿಂದ ರಕ್ಷಿಸುವುದು ಬ್ರಹ್ಮನ ಕೆಲಸ.
(ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ